Tuesday, September 13, 2011

ಮನೆ, ಮನಸು ಬೆಳಗಲಿ ಶ್ರೀ ವರ ಮಹಾಲಕ್ಷ್ಮೀ

WD

ಕರಾಗ್ರೇ ವಸತೇ ಲಕ್ಷ್ಮೀ | ಕರಮಧ್ಯೇ ಸರಸ್ವತೀ
ಕರಮೂಲೇ ಸ್ಥಿತೇ ಗೌರಿ | ಪ್ರಭಾತೇ ಕರದರ್ಶನಂ ||
ಎಂಬ ಮಂತ್ರದೊಂದಿಗೆ ಹೆಚ್ಚಿನವರು ತಮ್ಮ ಕರಗಳೆರಡನ್ನೂ ಕಂಗಳಲ್ಲಿ ತುಂಬಿಕೊಂಡು ದಿನವನ್ನಾರಂಭಿಸುತ್ತಾರೆ. ಕರದ ಅಗ್ರ ಸ್ಥಾನದಲ್ಲಿರುವವಳಾದ್ದರಿಂದ ಪಡೆಯುವುದಕ್ಕಿಂತಲೂ ಕೊಡುವುದರಲ್ಲಿ ಸಂತೃಪ್ತಿ ಕಾಣುವ ಜನರೆಂದರೆ ಲಕ್ಷ್ಮೀದೇವಿಗೆ ಅಚ್ಚುಮೆಚ್ಚು. ನಾವೆಷ್ಟು ಕೊಡುತ್ತೇವೆಯೋ, ಅದಕ್ಕಿಂತ ದುಪ್ಪಟ್ಟನ್ನು ಶ್ರೀ ಮಹಾಲಕ್ಷ್ಮಿಯು ನಮಗೆ ಕರುಣಿಸುತ್ತಾಳೆ ಎಂಬುದು ಆಸ್ತಿಕರ ನಂಬಿಕೆ.

ಪ್ರತಿಯೊಬ್ಬ ಪುರುಷನ ಏಳಿಗೆಯ ಹಿಂದೆ ಒಬ್ಬಳು ಸ್ತ್ರೀ ಇರುತ್ತಾಳೆ ಎಂಬ ಮಾತಿಗನುಗುಣವಾಗಿ, ಸ್ಥಿತಿ ಕಾರಕನಾದ ಶ್ರೀ ಮಹಾವಿಷ್ಣುವಿನ ಶಕ್ತಿಯೇ ಆಗಿರುವ ಶ್ರೀ ಮಹಾಲಕ್ಷ್ಮಿಯನ್ನು ಒಲಿಸಿಕೊಂಡರೆ ಸಕಲ ಇಷ್ಟಾರ್ಥ ಸಿದ್ಧಿಸುತ್ತದೆ ಎಂಬುದು ಆಸ್ತಿಕರ ನಂಬುಗೆ. ಹೀಗಾಗಿ ಪರಮಾತ್ಮನ ಒಲುಮೆ ಗಳಿಸಲು ಮಹಾಲಕ್ಷ್ಮೀ ಪೂಜೆಯು ಸನ್ಮಾರ್ಗವಿದ್ದಂತೆ. ನಾಗರಪಂಚಮಿಯಿಂದ ಆರಂಭವಾಗುವ ಹಬ್ಬಗಳ ಸಾಲಿನಲ್ಲಿ ಪ್ರತಿ ವರುಷವೂ ಹೆಂಗಳೆಯರ ಮನಸ್ಸು ಉಬ್ಬಿಸುವ ಹಬ್ಬಗಳಲ್ಲೊಂದು ಇದು.

ಪ್ರತಿ ವರ್ಷ ಶ್ರಾವಣ ಮಾಸದ ಎರಡನೇ ಶುಕ್ರವಾರ ವರಮಹಾಲಕ್ಷ್ಮೀ ವ್ರತ ಆಚರಿಸುವ ಮೂಲಕ ದೀರ್ಘ ಮಾಂಗಲ್ಯ ಭಾಗ್ಯವನ್ನು ಕೋರುವುದಲ್ಲದೆ, ತಮ್ಮ ಕುಟುಂಬಕ್ಕೆ ಸಂಪತ್ತು, ಸುಖ ಸಮೃದ್ಧಿ ಕೋರುವ ಸುಮಂಗಳೆಯರು, ಪುರೋಹಿತರ ಅಗತ್ಯವಿಲ್ಲದೆ ಮಾಡಬಹುದಾದ ವ್ರತವಿದು. ಹೀಗಾಗಿ, ತಾವೇ ಮಾಡುವ ಪೂಜೆ ಎಂಬ ಹೆಮ್ಮೆ ಈ ಹೆಂಗಳೆಯರಿಗೆ. ಜ್ಯೋತಿಷ್ಯದ ಪ್ರಕಾರ ಸಂಪತ್ತಿನ ಅಧಿಪತಿಯಾದ ಶುಕ್ರ ಗ್ರಹದ (ಶುಕ್ರ ದೆಸೆ ಎಂದರೆ ಶ್ರೀಮಂತಿಕೆ ಬಂದಿದೆ ಎಂಬ ವಾದ ಕೇಳಿದ್ದೀರಲ್ಲ...) ವಾರದಲ್ಲಿಯೇ ಈ ವ್ರತಾಚರಣೆ ನಡೆಯುತ್ತದೆ.

ಇನ್ನು ಹಬ್ಬದಾಚರಣೆಗೆ ನೆಪಗಳು ಬೇಕೇ? ದಿನಗಳೆದಂತೆ ಸಂಬಂಧಗಳು ಯಾಂತ್ರಿಕವಾಗುತ್ತಿರುವ ಈ ದಿನಗಳಲ್ಲಿ, ವರಮಹಾಲಕ್ಷ್ಮೀ ವ್ರತವು ಇತ್ತೀಚೆಗೆ ಸಾಮೂಹಿಕ ಆಚರಣೆಯಾಗುತ್ತಿರುವುದು, ಕಳೆದು ಹೋದ ಮಾನವೀಯ ಬಾಂಧವ್ಯಗಳ ಬೆಸುಗೆಗೂ ಪೂರಕವಾಗುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಹಬ್ಬಗಳ ಸಾರ್ವತ್ರಿಕ ಆಚರಣೆಯ ಧ್ಯೇಯವೂ ಇದೇ ಅಲ್ಲವೇ...?

ಯಾವುದೇ ಧಾರ್ಮಿಕ ಆಚರಣೆಗಳಲ್ಲೂ ಒಂದು ಸಂದೇಶವಂತೂ ಸುಸ್ಪಷ್ಟ. ಅದೆಂದರೆ ಮನೆಯು ಚಿಕ್ಕದಾಗಿದ್ದರೂ, ಮನಸು ದೊಡ್ಡದಾಗಿರಬೇಕು. ಮನಸ್ಸು ಶುಭ್ರವಾಗಿರಬೇಕು, ಶುದ್ಧಿಯಾಗಿರಬೇಕು. ಆಗಲೇ ಮಾನವ ಧರ್ಮಕ್ಕೆ ಬೆಲೆ.

ಅದಕ್ಕೇ ಅಲ್ಲವೇ ದಾಸರು ಹೇಳಿದ್ದು - "ತನುವೆಂಬ ಭಾಂಡವ ತೊಳೆದು, ಕೆಟ್ಟ ಮನದ ಚಂಚಲವೆಂಬ ಮುಸುರೆಯ ಕಳೆದು; ಘನವಾಗಿ ಮನೆಯನ್ನು ಬಳಿದು, ಅಲ್ಲಿ ಮಿನುಗುವ ತ್ರಿಗುಣದ ಒಲೆಗುಂಡ ನೆಡೆದು" ಅಂತ?

ಅವರವರ ಧರ್ಮಾಚರಣೆಯು ಅವರವರಿಗೇ ಶ್ರೇಷ್ಠ. ಅನ್ಯ ಧರ್ಮವನ್ನು ನಿಂದಿಸುವುದಕ್ಕೆ ಯಾವುದೇ ಧರ್ಮವೂ ಬೋಧಿಸುವುದಿಲ್ಲ. ಪರಧರ್ಮ ನಿಂದಿಸುತ್ತಾರೆಂದರೆ, ತಮ್ಮದೇ ಧರ್ಮವನ್ನು ದೂಷಿಸಿದಂತೆ ಎಂಬ ಸಂದೇಶದೊಂದಿಗೆ, ಭಾರತೀಯರು ಪರಧರ್ಮ ಸಹಿಷ್ಣುಗಳು ಎಂಬ ಮಾತನ್ನು ಉಳಿಸಿಕೊಳ್ಳೋಣ, ನಾವೆಲ್ಲರೂ ಮೊದಲು ಭಾರತೀಯರಾಗೋಣ, ಭಾರತೀಯತೆಯನ್ನು ಮೆರೆಯೋಣ.

ಶ್ರೀ ಮಹಾಲಕ್ಷ್ಮೀ ಧ್ಯಾನ
ಲಕ್ಷ್ಮೀಂ ಕ್ಷೀರಸಮುದ್ರ ರಾಜ ತನಯಾಂ ಶ್ರೀರಂಗ ಧಾಮೇಶ್ವರೀಂ
ದಾಸೀಭೂತ ಸಮಸ್ತ ದೇವವನಿತಾಂ ಲೋಕೈಕ ದೀಪಾಂಕುರಾಂ|
ಶ್ರೀಮನ್ಮಂದ ಕಟಾಕ್ಷ ಲಬ್ಧ ವಿಭವ ಬ್ರಹ್ಮೇಂದ್ರ ಗಂಗಾಧರಾಂ
ತ್ವಾಂ ತ್ರೈಲೋಕ್ಯ ಕುಟುಂಬಿನೀಂ ಸರಸಿಜಾಂ ವಂದೇ ಮುಕುಂದಪ್ರಿಯಾಮ್|

No comments:

Post a Comment